ಭಾಗ - ೨೦



मूलम् - ಮೂಲ:

अयं स्व्भावस्स्व्त एव यत्पर श्रमापनोदप्रवणं महात्मनाम् ।
सुधांशुरेष स्वयमर्क - कर्कश-प्रभाभितत्पा-मवति क्षितिं किल ॥೩೯।


ಅಯಂ ಸ್ವಭಾವಃ ಸ್ವತ ಏವ ಯತ್ಪರ-ಶ್ರಮಾಪನೋದ -ಪ್ರವಣಂ  ಮಹಾತ್ಮನಾಮ್ |
ಸುಧಾಂಶುರೇಷ ಸ್ವಯಮರ್ಕ-ಕರ್ಕಶ-ಪ್ರಭಾಽಭಿತಪ್ತಾಮವತಿ ಕ್ಷಿತಿಂ ಕಿಲ ||೩೯||

ಪ್ರತಿಪದಾರ್ಥ :

(ಸ್ವತಃ ಏವ = ತಾವಾಗಿಯೇ, ಪರಶ್ರಮಾಪನೋದ-ಪ್ರವಣಂ ಯತ್ = ಇತರರ ಕಷ್ಟ(ಶ್ರಮ)ಪರಿಹಾರದಲ್ಲಿ ಪ್ರವೃತ್ತಿಯು ಯಾವುದೋ, ಅಯಂ = ಇದು ಮಹಾತ್ಮರ, ಸ್ವಭಾವಃ = ಸಹಜಗುಣ, ಅರ್ಕ-ಕರ್ಕಶಪ್ರಭಾ-ಅಭಿತಪ್ತಾಂ = ಸೂರ್ಯನ ಪ್ರಖರವಾದ ಬಿಸಿಲಿನಿಂದ ಬೆಂದಿರುವ, ಕ್ಷಿತಿಂ = ಭೂಮಿಯನ್ನು, ಏಷಃ ಸುಧಾಂಶುಃ = ಈ ಚಂದ್ರಮನು, ಸ್ವಯಂ = ತಾನೇ, ಅವತಿ ಕಿಲ = ರಕ್ಷಿಸುವನಲ್ಲವೆ ? )

ತಾತ್ಪರ್ಯ :

ಇತರರ ಕಷ್ಟವನ್ನು, ಬೇನೆಗಳನ್ನು ಪರಿಹರಿಸುವುದರಲ್ಲಿ ತಾವಾಗಿಯೇ ಮುನ್ನುಗುವುದು ಮುಂದಾಲೋಚಿಸುವುದು ಮಹಾತ್ಮರು ಜ್ಞಾನಿಗಳೆನಿಸಿಕೊಂಡವರ ಸಹಜಗುಣವು.  ನೇಸರನ ತುಂಬ ಚುರುಕಾದ ಬಿಸಿಲಿನಿಂದ ಬೇಯುವ ಭೂಮಿಯನ್ನು ತಿಂಗಳನು ತಾನೇ ತನ್ನ  ಬೆಳಕಿನಿಂದ ತಂಪಾಗಿಸುವುದಿಲ್ಲವೆ ? .

ವಿವರಣೆ :

ಕಬ್ಬಿನಲ್ಲಿ ಸಿಹಿಯು ಏಕಿರಬೇಕು ಎಂಬ ಪ್ರಶ್ನೆಯೇ ಅಸಂಗತವಾಗಿಬಿಡುತ್ತದೆ. ಸಕ್ಕರೆಯಲ್ಲಿ ಸಿಹಿಯ ಕಾರಣವನ್ನು ಹುಡುಕಿದಂತೆ !.  ಕಬ್ಬಿನಲ್ಲಿ ಸಿಹಿಯು ಇರುವುದು ಹುಟ್ಟಿನಿಂದಲೇ ಬಂದುದಾಗಿರುತ್ತದೆ.  ಹಾಗೆಯೇ ಬ್ರಹ್ಮಜ್ಞಾನಿಗಳೆನಿಸಿಕೊಂಡವರು ಲೋಕದ ಸಂಕಟಕ್ಕೆ ತಾವಾಗಿಯೇ ಯಾವ ಪ್ರಚೋದನೆಗೂ ಒಳಗಾಗದೆ ಮರುಗುವ ಮತ್ತು ಕಷ್ಟವನ್ನು ಹೋಗಲಾಡಿಸುವ ಸಹಜಗುಣವನ್ನು ಹೊಂದಿರುತ್ತಾರೆ.

ಆಕ್ಷೇಪ :      ನಿಮಿತ್ತವಿಲ್ಲದೆ ಪ್ರವೃತ್ತಿಯೂ ಇಲ್ಲ ಅಲ್ಲವೆ ?
ಸಮಾಧಾನ : ರವಿ-ಚಂದ್ರರು ಯಾವ ನಿಮಿತ್ತದಿಂದ (ಕಾರಣದಿಂದ) ಧರೆಗೆ ಬೆಳಕನೀಯುತ್ತಿದ್ದಾರೆ ? ಈ ಪ್ರಕ್ರಿಯೆಯು ದಿನವೂ ಅನಿಮಿತ್ತವಾಗಿಯೇ ನೆಡೆಯುತ್ತಿದೆ.

ನೇಸರನ ಪ್ರಖರವಾದ ಕಿರಣಗಳು ಭೂಮಿಯನ್ನು ದಿನವೆಲ್ಲಾ ಕಾಯಿಸಿದರೆ ಇರುಳಿನಲ್ಲಿ ಚಂದ್ರನು ತನ್ನ ಸೊಬಗಿನ ಬೆಳಕಿನಿಂದ ಧರೆಯನ್ನು ತಂಪಾಗಿಸುತ್ತಾನೆ. ಇಬ್ಬರಿಗೂ ಯಾವ ಕಾರ್ಯ-ಕಾರಣಗಳೂ ಇಲ್ಲಿ ಇರುವುದಿಲ್ಲ. ಪ್ರಕೃತಿಯಲ್ಲಿನ ಸಹಜಕ್ರಿಯೆಗಳಂತೆ ಮಹಾತ್ಮರಾದವರೂ ಸಹ ಅನ್ಯರಿಗಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.  ದ.ರಾ. ಬೇಂದ್ರೆಯವರು ಹೇಳುವಂತೆ " ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ " ಎಂಬ ಭಾವವು ಇಲ್ಲಿ ಕಂಡುಬರುತ್ತದೆ. ಕರ್ಮಗಳೆಂಬ ಬಿರುಬಿಸಿಲಿನಲ್ಲಿ ಬೆಂದು ನೊಂದು ಬರುವ ಅಪೇಕ್ಷಿಯನ್ನು, ಜ್ಞಾನಿಯು ತತ್ವವೆಂಬ ತಿಂಗಳ ಬೆಳಕಿನಿಂದ ಸಂತೈಸುತ್ತಾನೆ. ಕಾರಿರುಳೆಂಬ ರಕ್ಕಸಿಯು ತೊಲಗಿದ ನಂತರ ಬೆಳಕೆಂಬ ಅಮೃತವು ಸಹಜವಾಗಿ ಬರುತ್ತದೆ. ಅಜ್ಞಾನವನ್ನು ತೊಡೆದು ಹಾಕುವುದಷ್ಟೇ ಗುರುವಿನ ಕೆಲಸ. ಜ್ಞಾನ ಪ್ರಾಪ್ತಿಯ ನಂತರ ಗುರುವೂ ಇಲ್ಲಿ ನಗಣ್ಯ !. ಇರುಳೇ ಇರದಿದ್ದರೆ ’ಹಗಲು ಬರುತ್ತದೆ’ ಎಬುದಕ್ಕೆ ಅರ್ಥವುಂಟೆ ? . ಮುಂದಿನದೆಲ್ಲವೂ ಸ್ವಾನುಭವದಿಂದಲೆ ಬರುವಂತಹುದು. ಜ್ಞಾನಿಗೆ ಯಾವ ನಿಮಿತ್ತವೂ ಇರುವುದಿಲ್ಲ.  ಮಾಗಿದ ಹಣ್ಣು ತಂತಾನೇ ಬೀಳುವಂತೆ ಮಹಾತ್ಮರೂ ಸಹ ಅನಿಮಿತ್ತವಾಗಿ ಲೋಕವನ್ನು ರಕ್ಷಿಸುತ್ತಾರೆ ಎಂದು ಆಚಾರ್ಯರು ವಿವರಿಸಿರುತ್ತಾರೆ.

मूलम् - ಮೂಲ

ब्रम्हानन्द-रसानुभूति-कलितैः पूतैः सुशीतैः सितैः
युष्मद्वाक्कल शोज्झितैः श्रुतिसुखैः वाक्यामृतैः सेचय ।
संतप्तं भवतापदावदहन-ज्वालाभिरेनं प्रभो
धन्यास्ते भवदिक्षण-क्षणगतेः पात्रिकृताः स्वीकृताः ॥४೦॥

ಬ್ರಹ್ಮಾನಂದ- ರಸಾನುಭೂತಿ-ಕಲಿತೈಃ ಪೂತೈಃ ಸುಶೀತೈರ್ಹಿತೈಃ(ಸಿತೈಃ)
ಯುಷ್ಮದ್-ವಾಕ್ಕಲಶೋಜ್ಝಿತೈಃಶ್ರುತಿಸುಖೈರ್ವಾಕ್ಯಾಮೃತೈಃ ಸೇಚಯ|
ಸಂತಪ್ತಂ ಭವತಾಪ -ದಾವದಹನ -ಜ್ವಾಲಾಭಿರೇನಂ ಪ್ರಭೋ
ಧನ್ಯಾಸ್ತೇ ಭವದೀಕ್ಷಣ -ಕ್ಷಣಗತೇಃ ಪಾತ್ರೀಕೃತಾಃ ಸ್ವೀಕೃತಾಃ || ೪೦||

ಪ್ರತಿಪದಾರ್ಥ :

(ಪ್ರಭೋ = ಹೇ ಗುರುವೆ, ಭವತಾಪ-ದಾವದಹನ-ಜ್ವಾಲಾಭಿಃ= ಸಂಸಾರವೆಂಬ ಕಾಳ್ಗಿಚ್ಚಿನ ಜ್ವಾಲೆಗಳಿಂದ, ಸಂತಪ್ತಂ = ಬೆಂದಿರುವ, ಏನಂ = ಈ (ನನ್ನನ್ನು), ಬ್ರಹ್ಮಾನಂದ -ರಸಾನುಭೂತಿ-ಕಲಿತೈಃ = ತನ್ನರಿವಿನ (ಬ್ರಹ್ಮಾನಂದದ) ಅನುಭವದಿಂದ ಕೂಡಿರುವ- ಮಧುರವಾಗಿರುವ, ಪೂತೈಃ= ಅಪ್ಪಟವಾದ(ಶುದ್ಧವಾದ), ಸುಶೀತೈಃ = ತಂಪಾಗಿರುವ (ಶೀತಲವಾಗಿರುವ), ಹಿತೈಃ = ಒಳ್ಳೆಯದಾದ(ಹಿತವಾಗಿರುವ), ಯುಷ್ಮತ್-ವಾಕ್-ಕಲಶ-ಉಜ್ಝಿತೈಃ = ನಿಮ್ಮ ಮಾತುಗಳೆಂಬ ಕಲಶದಿಂದ ಹೊರಹೊಮ್ಮಿರುವ, ಶ್ರುತಿಸುಖೈಃ = ಕೇಳಲು ಇಂಪಾಗಿರುವ, ವಾಕ್ಯಾಮೃತೈಃ = ನಲ್ನುಡಿಗಳೆಂಬ ಅಮೃತಧಾರೆಗಳಿಂದ, ಸೇಚಯ = ತೋಯಿಸು (ಚಿಮುಕಿಸು), ಭವತ್-ಈಕ್ಷಣ-ಕ್ಷಣ-ಗತೇ = ನಿನ್ನ ಕಟಾಕ್ಷದ ಕ್ಷಣಮಾತ್ರ -ಪ್ರಸರಣೆಗೆ, ಪಾತ್ರೀ-ಕೃತಾಃ = ಪಾತ್ರರಾಗಿರುವ, ಸ್ವೀಕೃತಾಃ = ಒಪ್ಪಿಗೆಯಾಗಿರುವ, ತೇ = ಅವರು(ಅಪೇಕ್ಷಿಯು), ಧನ್ಯಾಃ = ಧನ್ಯರು.)

ತಾತ್ಪರ್ಯ :

ಹೇ ಗುರುವೆ, ಸಂಸಾರತಾಪತ್ರಯವೆಂಬ ಕಾಳ್ಗಿಚ್ಚಿನಿಂದ ಬೆಂದಿರುವ ನೊಂದಿರುವ ನನ್ನನ್ನು ಬ್ರಹ್ಮಾನಂದ -ರಸಾನುಭವದಿಂದ ಕೂಡಿರುವ ಮಧುರವಾಗಿರುವ ಕೇಳಲು ಇಂಪಾಗಿರುವ ನಿಮ್ಮ ಮಾತೆಂಬ ಕಲಶದಿಂದ ಹೊರಹೊಮ್ಮಿರುವ ನಲ್ನುಡಿಗಳಿಂದ-ಉಪದೇಶಾಮೃತದಿಂದ ತೋಯಿಸಿರಿ-ಚಿಮುಕಿಸಿರಿ; ಇಂತಹ ನಿಮ್ಮ ಕಟಾಕ್ಷದ ಕ್ಷಣಮಾತ್ರದ ಪ್ರಸರಣೆಗೆ ಪಾತ್ರರಾಗಿ ಒಪ್ಪಿಗೆಯಾಗಿರುವವರೇ ಧನ್ಯರು !.

ವಿವರಣೆ :

ಹೀಗೆ ಶಿಷ್ಯನಾಗುವವನು ಗುರುವಿನ ಮುಂದೆ ನಿವೇದಿಸಿಕೊಳ್ಳುತ್ತಾ ತನ್ನನ್ನು ಸಂಸಾರದ ಜಂಜಡಗಳಿಂದ ಪಾರುಮಾಡಿ ಎಂದು ಕೇಳಿಕೊಳ್ಳುತ್ತಾನೆ. ಆ ಗುರುವಾದರೂ ಸ್ವತಃ ಬ್ರಹ್ಮಜ್ಞಾನಿಯೇ ಆಗಿರುತ್ತಾನೆ. ಬ್ರಹ್ಮಾನಂದದ ರಸಾನುಭವದಲ್ಲಿ ಮಿಂದಿರುತ್ತಾರೆ. ಗುರುವಿನ ತತ್ವೋಪದೇಶವು ಇಂಪಾದ ಸಂಗೀತದಂತಿರುತ್ತದೆ. ಇಂತಹ ಉಪದೇಶಾಮೃತವನ್ನು ನನಗೆ ಚಿಮುಕಿಸಿ ಎಂದು ಅಪೇಕ್ಷಿಯು ವಿನಂತಿಸುತ್ತಾನೆ. ಇಂತಹ ಕ್ಷಣಮಾತ್ರದ ಘಟನೆಗೆ ಪಾತ್ರರಾಗುವವರೇ ಧನ್ಯರು ಎಂದು ಆಚಾರ್ಯರು ವಿವರಿಸುತ್ತಾರೆ. ಗುರೂಪದೇಶವು ಅಜ್ಞಾನವನ್ನು ತೊಡೆದು ಹಾಕುವುದರಿಂದ ಅದು ಅಪ್ಪಟವಾದು (ಪೂತೈಃ) ಅಥವಾ ಪವಿತ್ರವಾದುದು ಮತ್ತು ರಜಸ್ಸು ಮತ್ತು ತಮಸ್ಸನ್ನು ಹೋಗಲಾಡಿಸಿ ಸತ್ವಗುಣಮಾರ್ಗವೊಂದನ್ನೆ ಹೊಂದಿಸುವುದರಿಂದ ಅದು ನಿರ್ಮಲವಾದುದು (ಸಿತೈಃ) ಎಂದು ಶ್ರೀ ಚಂದ್ರಶೇಖರ ಭಾರತಿಗಳು ವ್ಯಾಖ್ಯಾನಿಸಿರುತ್ತಾರೆ.
ಬ್ರಹ್ಮಜ್ಞಾನಕ್ಕೆ ಸ್ವಾನುಭವವೇ ಮುಖ್ಯವಾದರೂ ಗುರುವಿಲ್ಲದ ಗುರೂಪದೇಶವಿಲ್ಲದ ಜ್ಞಾನವು ವ್ಯರ್ಥವೆಂದೇ ತಿಳಿಯಬೇಕಾಗುತ್ತದೆ. ಗುರುವು catalyst (ವೇಗವರ್ಧಕ) ನಂತೆ ಕಾರ್ಯ ನಿರ್ವಹಿಸುತ್ತಾರೆ. ಉಪದೇಶವು ಮುಗಿದ ನಂತರ ಶಿಷ್ಯನು ಜ್ಞಾನಿಯೇ ಆಗಿರುತ್ತಾನೆ. ಶ್ರವಣಮಾತ್ರದಿಂದಲೇ (ಶ್ರುತಿ ಸುಖೈಃ) ಬ್ರಹ್ಮದ ಆನಂದವು ಲಭಿಸುವುದರಿಂದ ಮುಂದೆ ಉಪದೇಶದ ಅಗತ್ಯವಿಲ್ಲದೆ ಮನನ ಮತ್ತು ನಿಧಿಧ್ಯಾಸನಗಳಿಂದ ಬ್ರಹ್ಮದ ಅನುಭವವನ್ನು ಪಡೆಯುತ್ತಾನೆ ಎಂದು ಆಚಾರ್ಯರು ವಿವರಿಸುತ್ತಾರೆ.
ಗುರೂಪದೇಶವೆಂದರೆ ವೇದಾಂತದ ಅರ್ಥ ವಿಚಾರಗಳನ್ನು ತಿಳಿಯುವುದು ಚರ್ಚಿಸುವುದು ಮತ್ತು ಜ್ಞಾನಪ್ರಾಪ್ತಿಯ ನಂತರ ವಿಚಾರ-ಚರ್ಚೆಗಳನ್ನು ಬದಿಗಿಟ್ಟು ಬ್ರಹ್ಮಾನುಭವದಲ್ಲಿ ತೊಡಗುವುದು ಎಂದು ಹೇಳುತ್ತಾರೆ.
"ವೇದಾಂತದ ಅರಿವಿಲ್ಲದ ಜ್ಞಾನವೂ ವ್ಯರ್ಥ ಜ್ಞಾನಪ್ರಾಪ್ತಿಯ ನಂತರ ವೇದಾಂತವೂ ವ್ಯರ್ಥ" ಎಂದು ರಮಣಮಹರ್ಷಿಗಳು ಒಂದೆಡೆ ಹೇಳುತ್ತಾರೆ. (’ಜ್ಞಾನ ಬಂದಮೇಲೆ ವೇದಾಂತ ಏಕಪ್ಪಾ ? ತಲೆ ಚಚ್ಕೋಳೋಕೆ !’ ಎನ್ನುತ್ತಾರೆ ರಮಣರು) .
ಆಚಾರ್ಯರು ಜ್ಞಾನದ ಪಾರಮ್ಯದಲ್ಲಿ ಕರ್ಮವನ್ನು ಕಡೆಗಣಿಸಿದ್ದಾರೆ ಎಂಬ ಆಕ್ಷೇಪಗಳು ಅಲ್ಲಲ್ಲಿ ಬರುತ್ತಿರುತ್ತದೆ. ವಾಸ್ತವದಲ್ಲಿ ಶಂಕರರು ಕರ್ಮಕ್ಕೆ ಸಲ್ಲಬೇಕಾದ ಎಲ್ಲ ಗೌರವವನ್ನೂ ನೀಡಿದ್ದಾರೆ. ಅದನ್ನು ಆಚಾರ್ಯರ ಕೃತಿಗಳ ಅಧ್ಯಯನದಿಂದಲೇ ಕಂಡುಕೊಳ್ಳಬಹುದು. ಕರ್ಮದಲ್ಲಿ ಹೊಂದಾಣಿಕೆಯು ಬರುವಂತೆ ಜ್ಞಾನದಲ್ಲಿ ಯಾವ ಹೊಂದಾಣಿಕೆಯೂ ಬರುವುದಿಲ್ಲ.  ಪಕ್ಕದ ಮನೆಯವರು ತಿರುಪತಿಗೆ ಹೊರಟಿದ್ದಾರೆ ಎಂದರೆ ನಾವೂ ನೂರು ರೂಪಾಯಿ ಕೊಟ್ಟು ನಮ್ಮದೂ ಒಂದು ನಮಸ್ಕಾರ ಹಾಕಿ ಬನ್ನಿ ಎಂದು ಸವರಿಸಿ ಕುಳಿತಲ್ಲೇ ಗೋವಿಂದ ಎನ್ನಬಹುದು !. ಹಿರಿಯರ ಕಾರ್ಯಗಳನ್ನು ಮಾಡುವಾಗ (ಶ್ರಾದ್ಧಾದಿಗಳು) ಅನಿರ್ವಾಹ ಪಕ್ಷದಲ್ಲಿ ಸಂಬಂಧಿಕರಿಂದ ಅಂತಹ ಕರ್ಮಗಳನ್ನು ಮಾಡಿಸುವ ಅವಕಾಶವೂ ಉಂಟು. ಪಕ್ಕದಲ್ಲಿ ಇರದಿದ್ದರೂ ಅವರ ಹೆಸರು-ಕುಲ-ಗೋತ್ರಗಳನ್ನು ಹೇಳಿ ಕಾರ್ಯಗಳನ್ನು ನೆಡೆಸಬಹುದು ನೆಡೆಯಿಸುತ್ತಿದ್ದೇವೆ. ಇಂತಹ ಹೊಂದಾಣಿಕೆಗಳ ಗೊಂದಲದಲ್ಲಿ ಕರ್ಮದ ಬಲವು ಕಡಿಮೆಯಾಗುತ್ತದೆ. ಆದರೆ ಜ್ಞಾನವು ವಿಚಾರದಿಂದ ಮತ್ತು ಸ್ವಾನುಭದಿಂದ ಮಾತ್ರವೇ ಬರುವಂತಹುದಾದುದರಿಂದ ಹೊಂದಾಣಿಕೆಯ ಪ್ರಶ್ನೆಯೇ ಬರುವುದಿಲ್ಲ. ಹೋಟೆಲಿನ ಮಾಣಿಯು ಬಗೆಬಗೆಯ ತಿನಿಸುಗಳ ಪಟ್ಟಿಯನ್ನು ವದರಿದ ಮಾತ್ರಕ್ಕೆ ನಮ್ಮ ಹೊಟ್ಟೆ ತುಂಬಿಬಿಡುತ್ತದಯೆ ? ನಾವೇ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾಗುತ್ತದೆ.  ವದರುವ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು ಆದರೆ ತಿನ್ನುವುದು ಮಾತ್ರ ಸ್ವಾನುಭವದ ಕೆಲಸ !.

ಮುಂದೆ ಗುರು-ಶಿಷ್ಯರ ಸಂವಾದದ ಮೂಲಕ ಬ್ರಹ್ಮವಿದ್ಯೆಯ ಆರಂಭವನ್ನು ತಿಳಿಯೋಣ.

ವಂದನೆಗಳು.

ಕಾಮೆಂಟ್‌ಗಳು

  1. ಚೆನ್ನಾಗಿದೆ.

    ಇದರೊಟ್ಟಿಗೆ ಎಲ್ಲೆಲ್ಲೂ ’ಪುರುಷ ಪ್ರಯತ್ನ’ದ ಬಗ್ಗೆಯೂ ಹೇಳಿರುವಿರಿ. ಸ್ತ್ರೀ ಪ್ರಯತ್ನಗಳು ಇಲ್ಲವೆ ? :). ಸ್ತ್ರೀಯರಿಗೆ ಇದರಲ್ಲಿ ಅರ್ಹತೆ ಇಲ್ಲವೆ ?

    --ರಂಗನಾಥ

    ಪ್ರತ್ಯುತ್ತರಅಳಿಸಿ
  2. ಉತ್ತಮವಾಗಿ ವಿವರಿಸಿದ್ದೀರಿ..ಜ್ನಾನ ಸ್ವಾನುಭವದಿ೦ದ ಮಾತ್ರ ಬರುತ್ತದೆ ಎನ್ನುವುದನ್ನು ಉತ್ತಮ ,ಸರಳ ಉದಾಹರಣೆಗಳಿ೦ದ ತೋರಿಸಿದ್ದೀರಿ..ವ೦ದನೆಗಳು.

    ಪ್ರತ್ಯುತ್ತರಅಳಿಸಿ
  3. ರಂಗನಾಥರೆ,

    ಹಿಂದೊಮ್ಮೆಯೂ ನಿಮ್ಮಿಂದ ಈ ಪ್ರಶ್ನೆಯು ಬಂದಿತ್ತು. ನಾನು ಸರಿಯಾಗಿ ಗಮನಿಸದ ಕಾರಣ ಮತ್ತು ತಡವಾದುದರಿಮ್ದ ಪ್ರಕಟಿಸಿರಲಿಲ್ಲ, ಇರಲಿ.
    ಪುರುಷ ಮತ್ತು ಸ್ತ್ರೀ ಎನ್ನುವ ವಿಂಗಡಣೆ ಸಾರ್ವತ್ರಿಕ ವಲಯದಲ್ಲಿ ಪುರುಷರಿಗಾಗಿ - ಮಹಿಳ್ಯರ್ :) ಎಂದು ಬೋರ್ಡ್ ಹಾಕಿರುತ್ತಾರಲ್ಲಾ , ಆ ರೀತಿ ಇಲ್ಲಿ ಅರ್ಥೈಸಲ್ಪಡುವುದಿಲ್ಲ. ವೇದಾಂತದ ನಿಟ್ಟಿನಲ್ಲಿ ಹೇಳುವುದಾದರೆ ’ಪುರಃ’ ಎಂದರೆ ದೇಹ ಮತ್ತು ’ಶಹಃ’ ಎಂದರೆ ಶಯಿಸಿರುವ , ಅಂದರೆ ದೇಹದೊಳಗೆ ಸುಪ್ತವಾಗಿ ಅಡಕವಾಗಿರುವ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳುವುದು ಪುರುಷ ಪ್ರಯತ್ನ ಎನ್ನಿಸಿಕೊಳ್ಳುತ್ತದೆ. ವಿದ್ವಾಂದರುಗಳೂ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಸ್ತ್ರೀಯರಿಗೆ ಅರ್ಹತೆ ಇದೆ ಎಂಬುದನ್ನು ಯಾಜ್ಞ್ಯವಲ್ಕ್ಯರೇ ತೋರಿದ್ದಾರೆ. ಇನ್ನು ನಮ್ಮದೇನಿದೆ !?

    ಪ್ರತ್ಯುತ್ತರಅಳಿಸಿ
  4. ತಮ್ಮ ಲೇಖನ ಸರಣಿ ಸೊಗಸಾಗಿ ಮೂಡಿಬರುತ್ತಿದೆ. ಕೆಲಸದ ಒತ್ತಡದ ನಿಮಿತ್ತ ಇತ್ತೀಚಿಗೆ ಓದು ಬರಹಗಳು ಕಡಿಮೆಯಾಗಿರುವುದರಿಂದ ಇತ್ತ ಗಮನ ಹರಿಸಲಾಗಿರಲಿಲ್ಲ. ಇವತ್ತು ಓದುತ್ತಿದ್ದೇನೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮಂಜುನಾಥರೆ,

      ನೀವು ಒತ್ತಡದ ನಡುವೆಯೂ ಬಂದು ಓದಿದ್ದಕ್ಕೆ ಕೃತಜ್ಞನಾಗಿದ್ದೇನೆ. ನಿಮ್ಮ ಓದು ಮತ್ತು ಬರಹಗಳು ಹೆಚ್ಚಾಗಲಿ ಎಮ್ದು ಬಯಸುತ್ತೇನೆ.

      ಅಳಿಸಿ
  5. ಸ್ವಲ್ಪ ವಿಲಂಬದ ನಂತರ ಬಂದಿದೆ ಈ ವ್ಯಾಖ್ಯಾನ. ಆದರೇನು, ಅಮೃತಪಾನದಂತೆ ಭಾಸವಾಯಿತು. ‘ಆಕ್ಷೇಪ’ವನ್ನು ಸೇರಿಸಿದ್ದರಿಂದ ವಿವರಣೆ ಇನ್ನಷ್ಟು ಚೆನ್ನಾಗಿದೆ. ಇನ್ನು, ಪುರುಷ ಹಾಗು ಪ್ರಕೃತಿಯ ಬಗೆಗೆ ನನ್ನದೂ ಒಂದು ಮಾತನ್ನು ಸೇರಿಸಲೆ? ನಿರ್ಗುಣ ಪದಾರ್ಥಕ್ಕೆ ಗುಣವನ್ನು ತಂದು ಕೊಡುವುದು ಪ್ರಕೃತಿ. ಅದನ್ನು ಅನುಭವಿಸುವ ಆತ್ಮವೇ ಪುರುಷ. ಒಂದು ಗಂಡು ಕರಡಿಯು ಆ ತರಹ ವರ್ತಿಸಿದರೆ, ಅಥವಾ ಹೆಣ್ಣು ಹಾವು ಆ ತರಹ ವರ್ತಿಸಿದರೆ ಅದಕ್ಕೆ ಕಾರಣವಗಿರುವುದು ಪ್ರಕೃತಿ. ಆ ದೇಹಯಂತ್ರದ ಒಳಗಿರುವ ಆತ್ಮಕ್ಕೆ ಲಿಂಗವಿಲ್ಲ. ಪ್ರಕೃತಿ ಹಾಗು ಪುರುಷ ಇವುಗಳ ಲಿಂಗಭೇದ ಕೇವಲ ವ್ಯಾಕರಣಕ್ಕೆ ಸಂಬಂಧಿಸಿದಂತಹ ಸಂಗತಿ. ನನ್ನ ತಿಳಿವಳಿಕೆ ಸರಿಯೆ?

    ಪ್ರತ್ಯುತ್ತರಅಳಿಸಿ
  6. ಕಾಕಾ,
    ನಿಮ್ಮ ವಿವರಣೆ ಸುಸ್ಪಷ್ಟವಾಗಿದೆ. ತಿಳಿಯಾಗಿದೆ. ಲಿಂಗಭೇದವು ಗುರುತಿಸುವಿಕೆ ಅಥವಾ gender specification (ವ್ಯಾಕರಣ) ಗೆ ಸಂಬಂಧಿಸಿದ ಸಂಗತಿ ಎನ್ನುವುದು ಸರಿಯಾಗಿಯೇ ಇದೆ.
    ಇನ್ನೊಂದು ವಿಷಯವೆಂದರೆ ನಿಮ್ಮ ವಿವರಣೆಯಲ್ಲಿ ಜ್ಞಾನದ ಮುಂದೆ ಸಾಂಖ್ಯವು ಹೇಗೆ ಕುಂಠಿತವಾಗುತ್ತದೆ ಎನ್ನುವುದರ ಸೂಕ್ಷ್ಮವೂ ಅಡಗಿದೆ.

    ವಿಲಂಬಕ್ಕೆ ನನ್ನ ಮಗನ ಆಟ ಮತ್ತು ’ಓಟ’ಗಳೇ ಕಾರಣವಾಗಿದೆ. ಈ ವಿಷಯದಲ್ಲಿ ನನಗೆ excuse ಇದೆ ಎಂದುಕೊಳ್ಳುತ್ತೇನೆ :). ಆದರೂ ಹೆಚ್ಚು ತಡಾಮಾಡದೆ ಬರೆಯಲು ಯತ್ನಿಸುತ್ತೇನೆ. ನಿಮ್ಮ ಸೇರಿಸುವಿಕೆಯು ಹೀಗೆ ಮುಂದುವರಿಯಲಿ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  7. ನಿಜ..ಸುನಾಥ್ ಕಾಕಾ ಅವರು ಹೇಳಿದ೦ತೆ ಅಮೃತಪಾನದ೦ತೆನಿಸಿತು!!
    ವಿಷಯ ಕ್ಲಿಷ್ಟವಾಗಿದ್ದರೂ, ಸರಳ ಹಾಗೂ ಸುಲಲಿತವಾದ ವಿವರಣೆಯಿ೦ದ ವಿಷಯವು ಸುಲಭವಾಗಿ ಅರ್ಥವಾಗುವ೦ತಿದೆ.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  8. ಮನಮುಕ್ತಾ,
    ಕಷ್ಟವೆನಿಸಬಹುದಾದ ವಿಚಾರವೊಂದನ್ನು ಆಚಾರ್ಯರು ಎಲ್ಲರಿಗಾಗಿ ತಮ್ಮ ಕಾವ್ಯರೂಪದ ಅನೇಕ ಕೃತಿಗಳ ಮೂಲಕ ಸರಳವಾಗಿ ವಿವರಿಸಿದ್ದಾರೆ. ಕನ್ನಡದಲ್ಲಿ ಅಚ್ಚಿಸುವುದಷ್ಟೇ ನನ್ನ ಘನಕಾರ್ಯ !. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ