ಭಾಗ -೨೩

मूलम् :

अस्त्युपयो महान्कश्चित् संसारभयनाशनः ।
तेन तीर्त्वा भवांभोधिं परमानंदमाप्स्यसि ॥45॥

ಮೂಲ :

ಅಸ್ತ್ಯುಪಾಯೋ ಮಹಾನ್ ಕಶ್ಚಿತ್ ಸಂಸಾರಭಯನಾಶನಃ |
ತೇನ ತೀರ್ತ್ವಾ ಭವಾಂಭೋಧಿಂ ಪರಮಾನಂದಮಾಪ್ಸ್ಯಸಿ ||೪೫||

ಪ್ರತಿಪದಾರ್ಥ :

(ಸಂಸಾರಭಯನಾಶನಃ = ಸಂಸಾರಭಯವನ್ನು ಹೋಗಲಾಡಿಸುವ, ಮಹಾನ್ = ದೊಡ್ಡದಾದ, ಕಶ್ಚಿತ್ ಉಪಾಯಃ = ಒಂದು ಸಾಧನವು, ಅಸ್ತಿ = ಇದೆ; ತೇನ= ಅದರಿಂದ, ಭವಾಂಭೋಧಿಂ = ಸಂಸಾರ ಸಮುದ್ರವನ್ನು, ತೀರ್ತ್ವಾ = ದಾಟಿ, ಪರಮಾನಂದಮ್ = ಪರಮಾನಂದವನ್ನು, ಅಪ್ಸ್ಯಸಿ = ಹೊಂದುವೆ. )

ತಾತ್ಪರ್ಯ :

ಸಂಸಾರದ ಭಯವನ್ನು ಹೋಗಲಾಡಿಸಲು ಒಂದು ದೊಡ್ಡ ಉಪಾಯವಿದೆ. ಅದರಿಂದ ಭವಸಾಗರವನ್ನು ದಾಟಿ ಪರಮಾನಂದವನ್ನು ಹೊಂದಬಹುದು.

ವಿವರಣೆ :

ವಿದ್ವನ್ಮಣಿಯಾದ ಶಿಷ್ಯನಿಗೆ ಅಭಯವನ್ನು ಕೊಟ್ಟ ನಂತರ ಆತನ ಮುಂದಿನ ಸಾಧನೆಗಾಗಿ ದಾರಿಯನ್ನೂ ಗುರುವಾದವನು ತೋರಿಸಬೇಕಾಗುತ್ತದೆ. ಅದನ್ನಿಲ್ಲಿ ಆಚಾರ್ಯರು ವಿವರಿಸುತ್ತಾರೆ. ಭವಸಾಗರವನ್ನು ದಾಟುವುದೆಂದರೆ ಹೆಂಡತಿ ಮಕ್ಕಳು ಅಥವಾ ಸಂಬಂಧಿಕರ ಸಂಬಂಧಗಳನ್ನು ಕಳಚಿಕೊಂಡು ಎಲ್ಲೋ ಹೋಗಿ ಕೂರುವುದಲ್ಲ, ಅವೆಲ್ಲದರ ನಡುವೆ ಇದ್ದರೂ ಸಹ ಅವುಗಳಿಂದ ಒದಗಬಹುದಾದ ಬಂಧನಗಳಿಂದ ಬಿಡಿಸಿಕೊಳ್ಳುವುದು. ಹಾಗೆ ಬಿಡಿಸಿಕೊಳ್ಳುವುದಕ್ಕೆ ಉಪಾಯವಂತೂ ಇದ್ದೇಇದೆ. ಅವಿದ್ಯೆ ಅಥವಾ ಅಜ್ಞಾನವನ್ನು ತೊಡೆದುಕೊಳ್ಳುವುದರಿಂದ ಕೊನೆಯೇ ಇಲ್ಲದ ಶಾಶ್ವತವಾದ ಆನಂದವನ್ನು ಪಡೆಯಬಹುದು. ನಾನು ಹೇಳಿಕೊಡುವ ಉಪಾಯವನ್ನು ಅನುಸರಿಸಿದ್ದೇ ಆದಲ್ಲಿ ಅತ್ಯ್ತಂತ ದುಃಖವು ನಾಶವಾಗಿ ನಿರತಿಶಯವಾದ ಆನಂದವನ್ನು ಪಡೆಯುತ್ತೀಯೆ ಎಂದು ಗುರುವು ಶಿಷ್ಯನನ್ನು ಸಂತೈಸಿ ಅಭಯದಾನವನ್ನು ಮಾಡುತ್ತಾನೆ. -


मूलम् : 

वेदान्तार्थ विचारेण जायाते ज्ञानमुत्तमम् |
तेनात्यन्तिक संसारदुःखनाशो बवत्यनु ||46||

ಮೂಲ :

ವೇದಾಂತಾರ್ಥ ವಿಚಾರೇಣ ಜಾಯತೇ ಜ್ಞಾನಮುತ್ತಮುಮ್ |
ತೇನಾತ್ಯಂತಿಕ ಸಂಸಾರದುಃಖನಾಶೋ ಭವತ್ಯನು || ೪೬||

ಪ್ರತಿಪದಾರ್ಥ :

(ವೇದಾಂತಾರ್ಥ ವಿಚಾರೇಣ = ಉಪನಿಷದ್ವಾಕ್ಯಗಳ ಅರ್ಥದ ವಿಚಾರವಿಮರ್ಷೆಯಿಂದ , ಉತ್ತಮಂ ಜ್ಞಾನಂ = ತುಂಬ ಒಳ್ಳೆಯ ಅರಿವು , ಜಾಯತೇ = ಹುಟ್ಟುತ್ತದೆ, ಅನು = ಆ ಕೂಡಲೇ , ತೇನ = ಅದರಿಂದ, ಆತ್ಯಂತಿಕ ಸಂಸಾರ ದುಃಖ ನಾಶಃ = ಸಂಸಾರದ ಎಲ್ಲಾ ದುಃಖನಾಶವೂ, ಭವತಿ = ಆಗುತ್ತದೆ.)

ತಾತ್ಪರ್ಯ :

ಉಪನಿಷದ್ವಾಕ್ಯಗಳ ವಿಚಾರವಿಮರ್ಷೆಯಿಂದ ಉತ್ತಮ ಜ್ಞಾನವು ಮೂಡುವುದಲ್ಲದೆ ಆ ಕೂಡಲೇ ಸಂಸಾರದ ಸಕಲ ಭಯ ದುಃಖಗಳೂ ಇನ್ನಿದಾಗುತ್ತವೆ.

ವಿವರಣೆ :

ಅವಿದ್ಯೆ ಅಥವಾ ಅಜ್ಞಾನವು ಯಾವುದರಿಂದ ತೊಲಗಬಹುದು ? . ಉಪನಿಷತ್ತುಗಳನ್ನು ವೇದಾಂತವೆಂದು ಕರೆಯಲಾಗಿದೆ. ವೇದಗಳ ಸಾರವನ್ನೆಲ್ಲಾ ಗ್ರಹಿಸಿ ಅದರ ಆಶಯವು ಹೀಗಿದೆ ಎಂದು ವೇದದ ಕೊನೆಯಲ್ಲಿ ಉಪನಿಷತ್ತುಗಳಲ್ಲಿ ಹೇಳಲಾಗಿದೆ. ಇಂತಹ ವೇದಾಂತದ ವಿಚಾರವನ್ನು ವಿಮರ್ಷೆ ಮಾಡುವುದರಿಂದ , ಅಂದರೆ ಶ್ರವಣಮಾತ್ರದಿಂದಲೇ (ಅನು = ಆ ಕ್ಷಣವೇ, ಒಡನೆಯೇ) (ಒಮ್ಮನಸ್ಸಿನಿಂದ ಕೇಳುವುದರಿಂದಲೇ) ಭವಬಂಧನದ ಭಯವು ನಾಶವಾಗುತ್ತದೆ ಮತ್ತು ಮುಂದಿನ ದಾರಿಯನ್ನು ತುಳಿಯಲು (ಮನನ , ನಿಧಿಧ್ಯಾಸನ) ಅನುಕೂಲವಾಗುತ್ತದೆ. ಸಾಧನಾ ಚತುಷ್ಟಯದ ನಂತರ ಕರ್ಮಬಂಧನದ ಗೊಡವೆ ಇರುವುದಿಲ್ಲ ಎನ್ನುವುದನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಬಹುದು. ಕರ್ಮವೇನಿದ್ದರೂ ಶವಣಾರ್ಹತೆಯನ್ನು ಪಡೆಯುದಕ್ಕೆ ಮಾತ್ರ ಎಂದು ತಿಳಿಯಬಹುದು. ವೇದಾಂತದ ವಿಚಾರಗಳನ್ನು ಅರಿಯಲು ವಿಮರ್ಷಿಸಲೂ ಕೂಡ ಒಂದಷ್ಟು ಅರ್ಹತೆಯು ಇರಲೇಬೇಕಾಗುತ್ತದೆ.

ದೊಡ್ಡ ಪರೀಕ್ಷೆಯನ್ನು ಬರೆಯುವ ಮೊದಲು ಒಂದಷ್ಟು ಹಳೆಯ ಪ್ರಶ್ನಪತ್ರಿಕೆಗಳನ್ನು ತಿರುವಿಹಾಕುವುದರಿಂದ ಒಂದು ಮಟ್ಟಿಗಿನ ವಿಶ್ವಾಸವು ಪರೀಕ್ಷೆ ಬರೆಯುವವರಲ್ಲಿ ಮೂಡುತ್ತದೆ. ಹೋಟೆಲಿನಲ್ಲಿ ತಿಂದ ಇಡ್ಲಿಯು ಚೆನ್ನಾಗಿದೆ ಎಂದೆನಿಸಿದರೆ, ದೋಸೆಯೂ ಚೆನ್ನಾಗಿರಬಹುದೆಂಬ ಆಶಾಭಾವನೆಯು ಮೂಡುತ್ತದೆ ಮತ್ತು ಅದರಿಂದ ಆ ಹೋಟೆಲಿನಲ್ಲಿ ತಿಂದರೆ ಏನಾಗಿಬಿಡುತ್ತದೋ ಎಂಬ ಭಯವೂ ಆ ಕ್ಷಣಕ್ಕೆ ಮರೆಯಾಗುತ್ತದೆ.

ಹೀಗೆ ಆತ್ಮಜ್ಞಾನದ ದಾರಿಯು ಕಠಿನವೆನಿಸಿದರೂ ಉಪನಿಷತ್ತುಗಳ ತಿಳಿವಳಿಕೆಯಿಂದ ಕಾಠಿನ್ಯಭಾವವು ನಾಶವಾಗುತ್ತದೆ ಎಂದು ಆಚಾರ್ಯರು ವಿವರಿಸುತ್ತಾರೆ.


ಮುಂದಿನ ಭಾಗದಲ್ಲಿ ಇನ್ನಷ್ಟು ತಿಳಿಯೋಣ...

(ಕೆಲವು ಕಾರಣಗಳಿಂದ (ಮುಖ್ಯವಾಗಿ ಮಗನ ಕಡೆ ಗಮನ ಕೊಡಬೇಕಾಗಿದ್ದುದರಿಂದ) ನಿಯತವಾಗಿ ಬರೆಯಲಾಗಿರಲಿಲ್ಲ. ಇನ್ನುಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇನೆ. ಓದಿ ಬೆನ್ನುತಟ್ಟುತ್ತಿರುವವರೆಲ್ಲರಿಗೂ ಧನ್ಯವಾದ ).
-



ಕಾಮೆಂಟ್‌ಗಳು

  1. ನಿಮ್ಮ ಕೊನೆಯ ಸಾಲು ತುಂಬಾ ಇಷ್ಟವಾಯಿತು :) ನೋಡಿ, ಸಾಧನೆಯ ಹಾದಿಯಲ್ಲಿ ಎಷ್ಟು ಸುಂದರವಾದ ತೊಡಕುಗಳು. ನನಗೇನೋ ಸಾಧನೆಗಿಂತಾ ಇಂಥ ತೊಡಕುಗಳೇ ಇಷ್ಟ :)

    ತಮಾಷೆಗಂದೆ, ಇತ್ತೀಚಿಗಷ್ಟೇ ಅಂದುಕೊಂಡೆ ನಿಮ್ಮ ಬ್ಲಾಗು ಬರಹ ನಿಂತುಹೋದಂತಿದೆಯಲ್ಲಾ ಅಂತ. ನೀವು ಮತ್ತೆ ಆರಂಭಿಸಿದ್ದು ಸಂತೋಷ. ಮುಂದುವರೆಸಿ

    ಪ್ರತ್ಯುತ್ತರಅಳಿಸಿ
  2. ಸುಂದರ ತೊಡಕುಗಳು ಸದಾ ನಿಮಗಿರಲಿ; ವಿವೇಕಚೂಡಾಮಣಿಧಾರೆ ಅನವರತ ಹರಿಯುತಿರಲಿ.

    ಪ್ರತ್ಯುತ್ತರಅಳಿಸಿ
  3. ನೀವು ಉತ್ಸಾಹ ತುಂಬುತ್ತಿರುವವರೆವಿಗೂ ಇದು ಮುಂದುವರಿಯುತ್ತಲೇ ಇರುತ್ತದೆ :).

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ