ಭಾಗ -೨೪


मूलम् :

श्र्द्धाभक्ति ध्यानयोगान् मुमुक्षोः
मुक्तेर्हेतून् वक्ति साक्षात् श्र्तेर्गीः||
यो वा एतेष्वेव तिष्ठत्यमुष्य
मोक्षोsविद्याकल्पिताद् देहबन्धात् ॥४७॥

ಮೂಲ :

ಶ್ರದ್ಧಾಭಕ್ತಿ ಧ್ಯಾನಯೋಗಾನ್ ಮುಮುಕ್ಷೋಃ
ಮುಕ್ತೇರ್ಹೇತೂನ್ ವಕ್ತಿ ಸಾಕ್ಷಾತ್ ಶ್ರುತೇರ್ಗೀಃ |
ಯೋ ವಾ ಏತೇಷ್ವೇವ ತಿಷ್ಠತ್ಯಮುಷ್ಯ
ಮೋಕ್ಷೋsವಿದ್ಯಾಕಲ್ಪಿತಾದ್ ದೇಹಬಂಧಾತ್ || ೪೭||

ಪ್ರತಿಪದಾರ್ಥ :

(ಶ್ರುತೇ ಃ = ಉಪನಿಷತ್ತಿನ, ಗೀಃ = ವಾಕ್ಯವು, ಮುಮುಕ್ಷೋಃ = ಮುಮುಕ್ಷುವಿಗೆ, ಶ್ರದ್ಧಾ ಭಕ್ತಿ ಧ್ಯಾನಯೋಗಾನ್ = ಶ್ರದ್ಧೆ ಭಕ್ತಿ ಧ್ಯಾನಯೋಗ ಇವುಗಳನ್ನು, ಮುಕ್ತೇಃ = ಮುಕ್ತಿಯ, ಹೇತೂನ್ = ಕಾರಣಗಳನ್ನಾಗಿ, ಸಾಕ್ಷಾತ್ = ಪ್ರತ್ಯಕ್ಷವಾಗಿ, ವಕ್ತಿ = ಹೇಳುತ್ತದೆ, ಯಃ ವೈ = ಯಾರು, ಏತೇಷು ಏವ = ಇವುಗಳಲ್ಲಿಯೇ, ತಿಷ್ಠತಿ = ನೆಲೆಗೊಂಡಿರುವನೋ, ಅಮುಷ್ಯ = ಆತನಿಗೆ, ಅವಿದ್ಯಾಕಲ್ಪಿತಾತ್ = ಅವಿದ್ಯೆಯಿಂದ ಕಲ್ಪಿತವಾದ, ದೇಹಬಂಧಾತ್ = ದೇಹಬಂಧನದಿಂದ, ಮೋಕ್ಷಃ = ಬಿಡುಗಡೆಯು. )

ತಾತ್ಪರ್ಯ :

ಶ್ರುತಿವಾಕ್ಯವು ಶ್ರದ್ಧಾ ಭಕ್ತಿ ಧ್ಯಾನ ಯೋಗಗಳನ್ನು ಮುಕ್ತಿಕಾರಣಗಳೆಂದು ನೇರವಾಗಿ ಹೇಳುತ್ತವೆ. ಯಾರು ಇವುಗಳಲ್ಲೇ ನಿಲ್ಲುವರೋ ಅವರಿಗೆ ಅಜ್ಞಾನ ಕಲ್ಪಿತವಾದ ದೇಹಬಂಧನದಿಂದ ಬಿಡುಗಡೆಯು ಉಂಟಾಗುವುದು.

ವಿವರಣೆ :

ಉಪನಿಷತ್ತುಗಳಲ್ಲಿ ಶ್ರಧ್ಧೆ ಭಕ್ತಿ ಧ್ಯಾನ ಯೋಗಗಳನ್ನು ವಿಸ್ತಾರವಾಗಿ ಹೇಳಲಾಗಿದೆ. ಜ್ಞಾನಾಪೇಕ್ಷಿಯು ಇವುಗಳಲ್ಲಿ ಸರ್ವದಾ ತನ್ನ ಮನಸ್ಸನ್ನು ನೆಲೆಗೊಳಿಸಿಕೊಳ್ಳಬೇಕು. ಹಿಂದೆ ತಿಳಿದಂತೆ ' ಶಾಸ್ತ್ರಸ್ಯ ಗುರುವಾಕ್ಯಸ್ಯ ' ಎಂಬ ವಿವರಣೆಯಂತೆ ಗುರುವಿನಿಂದ ಉಪದೇಶವಾದುದನ್ನು ಪಾಲಿಸುವುದರಿಂದ ಅವಿದ್ಯಾಕಲ್ಪಿತವಾದ ದೇಹಬಂಧನದಿಂದ ಬಿಡುಗಡೆ ಹೊಂದಬಹುದು ಎನ್ನುವುದು ತಾತ್ಪರ್ಯ. ಜ್ಞಾನ ಮಾರ್ಗದಲ್ಲಿ ಮುಂದಾಗುವ ಅನುಭವಗಳಿಗೆ ಹಿಂದೆ ನೆಡೆದುಕೊಂಡುಬಂದಿರುವುದೇ ಕಾರಣವಾಗುತ್ತದೆ ಎಂದು ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ವ್ಯಾಖ್ಯಾನಿಸಿರುಸುತ್ತಾರೆ. ಯಾರು ಶ್ರದ್ಧೆಯುಳ್ಳವನೂ, ಭಕ್ತಿಯುಳ್ಳವನೂ , ನಿತ್ಯವೂ ಧ್ಯಾನಮಾಡುವವನೂ, ಯೋಗಿಯೂ ಆಗಿರುವನೋ ಅಂತಹ ಅಧಿಕಾರಿಗೆ ಅಹಂಕಾರಾದಿ ದೇಹಬಂಧನದಿಂದ ಮುಕ್ತಿಯು ಸಿಧ್ಧಿಸುತ್ತದೆ ಎಂದು ಹೇಳಿರುತ್ತಾರೆ.

मूलम् :

अज्ञानयोगात्परमात्मनस्तव
ह्यनात्मबन्धस्तत् एव संस्ुतिः |
तयोर्विवेकोदित बोधवह्निः
अज्ञनकार्यं प्र्दहेत समूलम् ||४८||

ಮೂಲ:

ಅಜ್ಞಾನಯೋಗಾತ್ ಪರಮಾತ್ಮನಸ್ತವ
ಹ್ಯನಾತ್ಮಬಂಧಸ್ತತ ಏವ ಸಂಸೃತಿಃ |
ತಯೋರ್ವಿವೇಕೋದಿತ ಬೋಧವಹ್ನಿಃ
ಅಜ್ಞಾನಕಾರ್ಯಂ ಪ್ರದಹೇತ್ ಸಮೂಲಮ್ ||೪೮||

ಪ್ರತಿಪದಾರ್ಥ :

(ಪರಮಾತ್ಮನಃ = ಪರಮಾತ್ಮನಾದ, ತವ ಹಿ = ನಿನಗೂ , ಅಜ್ಞಾನಯೋಗಾತ್ = ಅಜ್ಞಾನಸಂಬಂಧದಿಂದ, ಅನಾತ್ಮಬಂಧಃ = ದೇಹಾಭಿಮಾನವು, ತತಃ ಏವ = ಅದರಿಂದಲೇ , ಸಂಸೃತಿಃ = ಸಂಸಾರವು, ತಯೋಃ = ಅವೆರೆಡರ, ವಿವೇಕೋದಿತ ಬೋಧವಹ್ನಿಃ = ವಿಚಾರದಿಂದ ಹುಟ್ಟಿದ ಜ್ಞಾನಾಗ್ನಿಯು , ಅಜ್ಞಾನ ಕಾರ್ಯಂ = ಅವಿದ್ಯೆಯ ಕಾರ್ಯವಾದ (ಬಂಧವನ್ನು), ಸಮೂಲಂ ಪ್ರದಹೇತ್ = ಬೇರಿನೊಡನೆ ದಹಿಸುವುದು )

ತಾತ್ಪರ್ಯ:

ಪರಮಾತ್ಮನಾದ ನಿನಗೂ ಅವಿದ್ಯಾಸಂಬಂಧದಿಂದಲೇ ದೇಹಾಭಿಮಾನವು ಉಂಟಾಗಿದೆ. ಅದರಿಂದಲೇ ಜನನ ಮರಣರೂಪವಾದ ಸಂಸಾರ ; 'ಆತ್ಮ ಅನಾತ್ಮ' ಈ ಎರಡರ ವಿಚಾರದಿಂದ ಉತ್ತಮವಾದ ಅರಿವು ಉಂಟಾಗಿ ಆ ಜ್ಞಾನಾಗ್ನಿಯು ಅವಿದ್ಯೆಗೆ ಕಾರಣವಾಗುವ ಬಂಧವೆಂಬ ಮರವನ್ನು ಬೇರುಸಹಿತ ದಹಿಸುವುದು.

ವಿವರಣೆ :

ಗುರುವು ಶಿಷ್ಯನಿಗೆ ಭವಬಂಧನದ ಭಯವು ಏಕೆ ಆತನಲ್ಲಿ ಹುಟ್ಟಿತು ಎಂಬುದನ್ನು ಸಂಯಮದಿಂದ ತಿಳಿಸುತ್ತಾರೆ. ಶಿಷ್ಯನು ಈಗಾಗಲೇ ಪರಮಾತ್ಮನೇ ಆಗಿದ್ದಾನೆ. ಆದರೆ, ಅದರ ಅನುಭೂತಿಯಷ್ಟೇ ಆತನಲ್ಲಿ ಉಂಟಾಗಬೇಕಿದೆ. ಪರಮಾತ್ಮನಾದ ಶಿಷ್ಯನಿಗೆ ಅವಿದ್ಯೆ ಅಥವಾ ಅಜ್ಞಾನ ಸಂಬಂಧವಾದ ದೇಹಾಭಿಮಾನವಿರುವುದರಿಂದ ಆತನಲ್ಲಿ ಬಂಧನದ ಭಯವು ಆವರಿಸಿಕೊಂಡಿದೆ. ಆದುದರಿಂದ ಆತ್ಮಾನಾತ್ಮ ವಿಚಾರವನ್ನು ಗುರುವಿನೊಡನೆ ಚರ್ಚಿಸಿದಾಗ ಉತ್ತಮವಾದ ಅರಿವು ಹುಟ್ಟುತ್ತದೆ. ಹಾಗೆ ಹುಟ್ಟುವ ಜ್ಞಾನವು ಬೆಂಕಿಗೆ ಸಮಾನವಾಗಿರುತ್ತದೆ. ಅಂತಹ ಜ್ಞಾನಾಗ್ನಿಯು ಕರ್ಮಸಂಬಂಧವಾದ ಎಲ್ಲಾ ಅವಿದ್ಯೆಗಳನ್ನೂ, ಅಜ್ಞಾನವೆಂಬ ದೊಡ್ಡಮರವನ್ನೂ ಬೇರುಸಮೇತ ಸುಟ್ಟುಹಾಕುತ್ತದೆ. ನಂತರ ಪರಿಶುಧ್ಧವಾದ ಕೇವಲ ಜ್ಞಾನವೊಂದೇ ಉಳಿಯುತ್ತದೆ.
ಇಲ್ಲಿ ಗೀತೆಯ "ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃಪಂಡಿತಂಬುಧಾ ಃ ' ಎನ್ನುವ ವಾಕ್ಯವನ್ನು ಮನನ ಮಾಡಬಹುದು.
ಹೆಣವನ್ನು ಸುಟ್ಟರೂ ತರಗೆಲೆಗಳನ್ನು ಸುಟ್ಟರೂ ಕಡೆಯಲ್ಲಿ ಉಳಿಯುವುದು ಬೂದಿಯೆ !. ಎಲೆಗೂ ದೇಹಕ್ಕೂ ವ್ಯತ್ಯಾಸವಿದ್ದರೂ ಬೂದಿಯಲ್ಲೇನೂ ವ್ಯತ್ಯಾಸ ಕಾಣಲಾರದು. ವೈದ್ಯರು ದೇಹಕ್ಕೆ ಚುಚ್ಚುಮದ್ದನ್ನು ಕೊಡುವ ಮುನ್ನ ಸೂಜಿಯನ್ನು ಚೆನ್ನಾಗಿ ಬಿಸಿನೀರಿನಲ್ಲಿ ಕುದಿಸುತ್ತಾರೆ. ಸೂಜಿಯಲ್ಲಿದ್ದಿರಬಹುದಾದ ಸೂಕ್ಷ್ಮಾಣು ಜೀವಿಗಳು ಆಗ ಸತ್ತುಹೋಗುತ್ತವೆ.
ಪುನರಾವೃತ್ತಿ ಇಲ್ಲದಂತೆ ಪರಿಶುಧ್ಧವಾಗುವುದು ಎನ್ನುದು ಮತ್ತೊಂದು ಅರ್ಥ.
ಭ್ರಾಂತಿ ಅಜ್ಞಾನಗಳೆಲ್ಲವೂ ಬೇರುಸಹಿತ ಸುಟ್ಟುಹೋದನಂತರ ಶುಧ್ಧ ಜ್ಞಾನವು ಉಳಿಯುತ್ತದೆ ಎಂದು ಆಚಾರ್ಯರು ತಿಳಿಸುತ್ತಾರೆ.


ಮುಂದಿನ ಭಾಗದಲ್ಲಿ ಇನ್ನಷ್ಟು ತಿಳಿಯೋಣ...

ಕಾಮೆಂಟ್‌ಗಳು

  1. ಶ್ರದ್ಧೆ ಭಕ್ತಿ ಧ್ಯಾನ ಇವೆಲ್ಲವನ್ನು ಹೊಂದಿದವ ಏನು ಬೇಕಾದರೂ ಸಾಧಿಸುತ್ತಾನೆ... ಅರ್ಥಪೂರ್ಣ ಶ್ಲೋಕ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  2. ಆತ್ಮಬೋಧೆಯನ್ನು ನೀಡುವ ಶಂಕರಗುರುವಿಗೆ ಸಹಸ್ರ ನಮನಗಳು. ಆ ಬೋಧೆಯನ್ನು ತಿಳಿ ಹೇಳುವ ನಿಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. 'ಎಲೆಗೂ ದೇಹಕ್ಕೂ ವ್ಯತ್ಯಾಸವಿದ್ದರೂ ಬೂದಿಯಲ್ಲೇನು ವ್ಯತ್ಯಾಸ ಕಾಣದು' - ಉತ್ತಮ ಉದಾಹರಣೆಗಳ ಮೂಲಕ ತಿಳಿಸುತ್ತಿರುವ ನಿಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ